ತಮಿಳುನಾಡಿನ ಶೈಲಿ! ಅಧರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಅಂತಾರಲ್ಲಾ ಹಾಗೇ ಮೆಂತ್ಯ ತಿನ್ನುವಾಗ ಕಹಿ ಅನ್ನಿಸಿದರೂ ದೇಹಕ್ಕೆ ತುಂಬಾ ಒಳ್ಳೆಯದು!
ಬೇಕಾಗುವ ಸಾಮಾಗ್ರಿಗಳು:
ಮೆಂತ್ಯ(ಮೊಳಕೆ ಕಟ್ಟಿದ್ದು) - 1/2 ಟೀ ಚಮಚ
ಕಡಲೇ ಬೇಳೆ - 1 ಟೇಬಲ್ ಚಮಚ
ಧನಿಯಾ - 1/2 ಟೇಬಲ್ ಚಮಚ
ಕಾಯಿ ತುರಿ - 2 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ - 6 ರಿಂದ 8
ಈರುಳ್ಳಿ/ಸಾಂಬಾರ್ ಈರುಳ್ಳಿ
ಹುಣಸೇರಸ
ಬೆಲ್ಲ
ಅರಿಸಿನ
ಹಿಂಗು
ಉಪ್ಪ್ಪು
ಒಗ್ಗರಣೆಗೆ:
ಸಾಸಿವೆ
ಕಡ್ಲೆಬೇಳೆ
ಉದ್ದಿನಬೇಳೆ
ಕರಿಬೇವು
ಎಣ್ಣೆ
ಮಾಡುವ ವಿಧಾನ:
1.ಕಡಲೇ ಬೇಳೆ, ಧನಿಯಾ,ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.
2. ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ.
3. ಎರಡೂ ಪುಡಿಗಳನ್ನು ಕಾಯಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ.
4. 1/2 ಬಟ್ಟಲ ಸಾಂಬಾರ್ ಈರುಳ್ಳಿ ಸಿಪ್ಪೆ ತೆಗೆದಿಡಿ. ಸಾಂಬಾರ್ ಈರುಳ್ಳಿ ಸಿಗದಿದ್ದರೆ ಒಂದು ದೊಡ್ಡ ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.2 ಚಮಚ ಹುಣಸೆ ರಸ ತೆಗೆದಿಡಿ.
5.ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಅರಿಶಿನ, ಇಂಗು, ಸಾಂಬಾರ್ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.
6. ಮೊಳಕೆ ಬಂದ 2 ಟೇಬಲ್ ಚಮಚ ಮೆಂತ್ಯ ಹಾಕಿ ಹುರಿದು, ರುಬ್ಬಿದ ಮಿಶ್ರಣ, ಹುಣಸೆ ರಸ, ಕಡಲೇ ಬೀಜದಷ್ಟು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ತಟ್ಟೆ ಮುಚ್ಚಿ ಮೆಂತ್ಯ ಪೂರ್ತಿಯಾಗಿ ಬೇಯುವವರೆಗೆ ಬೇಯಿಸಿ.
7. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಆರೋಗ್ಯಕರವಾದ ಮೆಂತ್ಯ ಗೊಜ್ಜು/ವೆಂದ್ಯ ಕೊಳಂಬು ಸಿದ್ಧ!
ಈ ರೆಸಿಪಿ ಮೆಂತ್ಯದ ಮಹತ್ವ ಗೊತ್ತಿರುವವರಿಗೆ ತುಂಬಾ ಇಷ್ಟವಾಗುತ್ತೆ ಎನ್ನುವುದು ನನ್ನ ಅಭಿಪ್ರಾಯ!
*ಮೊಳಕೆ ಬಂದ ಮೆಂತ್ಯದ ಬದಲು ಸಾಧಾರಣ ಮೆಂತ್ಯ ಬೇಕಾದರೆ ಹಾಕಿಕೊಳ್ಳಬಹುದು.ನಿಮ್ಮ ರುಚಿಗೆ ತಕ್ಕಷ್ಟು ಮೆಂತ್ಯ ಹಾಕಿಕೊಳ್ಳಬಹುದು.
*ಅಥವಾ ಮೆಂತ್ಯ ಸೊಪ್ಪು ಹಾಕಿ ಬೇಕಾದರೂ ಮಾಡಬಹುದು!
*ಮೆಂತ್ಯ ಮೊಳಕೆ ಬಂದ ನಂತರ ಕಹಿ ಕಡಿಮೆ ಆಗಿರುತ್ತದೆ. ಆರೋಗ್ಯಕ್ಕೂ ಬಹಳ ಒಳ್ಳೆಯದು!
ಈ ಗೊಜ್ಜು ಅನ್ನ, ಚಪಾತಿಯೊಂದಿಗೆ ಸಹ ತುಂಬಾ ಚೆನ್ನಾಗಿರುತ್ತದೆ!