Sunday, 24 December 2017

ನೆಲ್ಲಿಕಾಯಿ ತೊಕ್ಕು

 
 ರುಚಿ ಕೆಟ್ಟ ಬಾಯಿಗೆ ನೆಲ್ಲಿಕಾಯಿ ತೊಕ್ಕು ಒಂದು ವಿಶಿಷ್ಟ ರುಚಿ.
ಬೇಕಾಗುವ ಸಾಮಾಗ್ರಿಗಳು:
ನೆಲ್ಲಿಕಾಯಿ -10 ರಿಂದ 12
ಉಪ್ಪು ರುಚಿಗೆ
ಖಾರದಪುಡಿ -3 ರಿಂದ4 ಚಮಚ
ಅರಿಶಿಣದ ಪುಡಿ- ಅರ್ಧ ಚಮಚ
ಮೆಂತ್ಯೆ ಪುಡಿ -1ಚಮಚ
ಸಾಸಿವೆ ಪುಡಿ- 2 ಚಮಚ
ನಿಂಬೆಹಣ್ಣು- 2
ಒಗ್ಗರಣೆಗೆ:
ಎಣ್ಣೆ
ಸಾಸಿವೆ
ಜೀರಿಗೆ
ಇಂಗು -ಚಿಟಿಕೆ

ಮಾಡುವ ವಿಧಾನ:
1.ಮೊದಲು ನೆಲ್ಲಿಕಾಯಿಯನ್ನು ತುರಿಯೋಮಣೆಯಲ್ಲಿ ತುರಿದು ಕೊಳ್ಳಬೇಕು.
2.ತುರಿದಿರುವ ನೆಲ್ಲಿಕಾಯಿಗೆ ಉಪ್ಪು, ಖಾರ ,ಅರಿಶಿಣ, ಮೆಂತ್ಯೆ ಪುಡಿ, ಸಾಸಿವೆ ಪುಡಿ ನಿಂಬೆಹಣ್ಣಿನ ರಸ ಎಲ್ಲಾ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು
3.ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ , ಜೀರಿಗೆ , ಇಂಗನ್ನು ಒಗ್ಗರಣೆ ಮಾಡಿ.
4. ಇದು ಆರಿದ ನಂತರ ನೆಲ್ಲಿಕಾಯಿಯ ತೊಕ್ಕು ಹಾಕಿ ಚೆನ್ನಾಗಿ ಕಲಸಬೇಕು . ಈಗ ನೆಲ್ಲಿಕಾಯಿ ತೊಕ್ಕು ರೆಡಿ.
          ಇದು ಹೊರಗಡೆ 5, 6 ದಿನ ಇರುತ್ತದೆ . ಫ್ರಿಡ್ಜ್ ನಲ್ಲಿ 1 ತಿಂಗಳ ವರೆಗೂ ಇರುತ್ತದೆ . ತುಂಬಾ ರುಚಿ ರುಚಿಯಾದ ಈ ತೊಕ್ಕು ನೀವು ಮಾಡಿ ನೋಡಿ ,ತಿಂದು ತಿಳಿಸಿ.

Tuesday, 19 December 2017

ಎಣ್ಣೆ ಉದುರು ಝುಣಕ

     


       ಉದರ ಝುಣಕ ಇದನ್ನು ತಯಾರಿಸಿದ 2 ದಿನಗಳ ವರೆಗೂ ಕೆಡುವುದಿಲ್ಲ. ಪ್ರವಾಸದಲ್ಲಿ ಚಪಾತಿ ಅಥವಾ ರೊಟ್ಟಿಯ ಜೊತೆಗೆ ಇದು ತುಂಬಾ ಒಳ್ಳೆಯದು.ಹಾಗಂತ ಪ್ರವಾಸಕ್ಕೆ ಹೊರಟಾಗ ಮಾತ್ರ ಮಾಡುವ ರೆಸಿಪಿ ಅಂತ ತಿಳಿಯಬೇಡಿ .

ಬೇಕಾಗುವ ಸಾಮಗ್ರಿಗಳು:
ಕಡ್ಲೆಹಿಟ್ಟು-1ಕಪ್
ಎಣ್ಣೆ-1/2ಕಪ್
ಹಾಲು-1ಕಪ್
ಖಾರದ ಪುಡಿ-ರುಚಿಗೆ
ಉಪ್ಪು
ಗರಂ ಮಸಾಲಾ- ಸ್ವಲ್ಪ
ಅರಿಶಿನ ಪುಡಿ -ಸ್ವಲ್ಪ
ಹಿಂಗು-ಚಿಟಿಕೆ
ಸಾಸಿವೆ
ಜೀರಿಗೆ
ಬೆಳ್ಳುಳ್ಳಿ -6-7 ಎಸಳು ( ಬೆಳ್ಳುಳ್ಳಿ ತಿನ್ನದವರು ಬೆಳ್ಳುಳ್ಳಿ ಹಾಕದೆ ಮಾಡಬಹುದು)
ಕರಿಬೇವು -ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ

      ಯಾವ ಕಪ್ ನಿಂದ ಹಿಟ್ಟು ಅಳತೆ  ಮಾಡಿರುವಿರೋ ಅದೇ ಕಪ್ ನ ಅಳತೆ ಹಾಲು ಹಾಕಿ.(ಹಾಲು ಇಷ್ಟ ಪಡದವರು ನೀರು ಬಳಸಿ).

ಮಾಡುವ ವಿಧಾನ:
1.ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ .ಎಣ್ಣೆ ಬಿಸಿ ಆದ ನಂತರ ಸಾಸಿವೆ , ಕರಿಬೇವು ಮತ್ತು ಹಿಂಗು ಹಾಕಿ.
2.ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿದು ,ಸ್ವಲ್ಪ ಜೀರಿಗೆ ಹಾಕಿ.
3.ನಂತರ ಖಾರದ ಪುಡಿ(ಖಾರಾ ಸ್ವಲ್ಪ ಜಾಸ್ತಿ ಹಾಕಿದರೆ ರುಚಿ ಚೆನ್ನಾಗಿ ಇರುತ್ತೆ.),ಸ್ವಲ್ಪ ಗರಂ ಮಸಾಲಾ, ಅರಿಶಿನ ಪುಡಿ ಹಾಕಿ.
4.ನಂತರ ಹಾಲು ಹಾಕಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹಾಲು ಕುದಿಯಲು ಆರಂಭಿದ ಮೇಲೆ ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪ ಹಾಕುತ್ತಾ ತಿರುವುತ್ತ ಇರಿ.

5.ಹಿಟ್ಟು ಹಾಕಿದ ನಂತರ ಮಧ್ಯಮ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಬಿಸಿ ಮಾಡಿ.
6.ನಂತರ 15 ನಿಮಿಷಗಳವರೆಗೆ ಆರಲು ಬಿಡಿ.ಝುಣಕ ತಣ್ಣಗಾದ ನಂತರ ಸೌಟಿನಿಂದ ಮತ್ತೊಮ್ಮೆ ಚೆನ್ನಾಗಿ ತಿರುವಿದ ನಂತರ ಝುಣಕ ಉದರುದುರು ಆಗುತ್ತೆ.

       ಜಟ್ ಪಟ್ ಅಂತ ಆಗುವ ಉದುರು ಝುಣಕ ರೆಡಿ.

Sunday, 17 December 2017

ಮೆಂತ್ಯ ಗೊಜ್ಜು/ವೆಂದ್ಯ ಕೊಲಂಬು

           
 ತಮಿಳುನಾಡಿನ ಶೈಲಿ! ಅಧರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಅಂತಾರಲ್ಲಾ ಹಾಗೇ ಮೆಂತ್ಯ ತಿನ್ನುವಾಗ ಕಹಿ ಅನ್ನಿಸಿದರೂ ದೇಹಕ್ಕೆ ತುಂಬಾ ಒಳ್ಳೆಯದು!

ಬೇಕಾಗುವ ಸಾಮಾಗ್ರಿಗಳು:
ಮೆಂತ್ಯ(ಮೊಳಕೆ ಕಟ್ಟಿದ್ದು) - 1/2 ಟೀ ಚಮಚ
ಕಡಲೇ ಬೇಳೆ - 1 ಟೇಬಲ್ ಚಮಚ
ಧನಿಯಾ  - 1/2 ಟೇಬಲ್ ಚಮಚ
ಕಾಯಿ ತುರಿ - 2 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ - 6 ರಿಂದ 8
ಈರುಳ್ಳಿ/ಸಾಂಬಾರ್ ಈರುಳ್ಳಿ
ಹುಣಸೇರಸ
ಬೆಲ್ಲ
ಅರಿಸಿನ
ಹಿಂಗು
ಉಪ್ಪ್ಪು

ಒಗ್ಗರಣೆಗೆ:
ಸಾಸಿವೆ
ಕಡ್ಲೆಬೇಳೆ
ಉದ್ದಿನಬೇಳೆ
ಕರಿಬೇವು
ಎಣ್ಣೆ

ಮಾಡುವ ವಿಧಾನ:
1.ಕಡಲೇ ಬೇಳೆ, ಧನಿಯಾ,ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.
2. ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ.
3. ಎರಡೂ ಪುಡಿಗಳನ್ನು ಕಾಯಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ.
4. 1/2 ಬಟ್ಟಲ ಸಾಂಬಾರ್ ಈರುಳ್ಳಿ ಸಿಪ್ಪೆ ತೆಗೆದಿಡಿ. ಸಾಂಬಾರ್ ಈರುಳ್ಳಿ ಸಿಗದಿದ್ದರೆ ಒಂದು ದೊಡ್ಡ ಈರುಳ್ಳಿ  ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.2 ಚಮಚ ಹುಣಸೆ ರಸ ತೆಗೆದಿಡಿ.
5.ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಅರಿಶಿನ, ಇಂಗು, ಸಾಂಬಾರ್ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.
6. ಮೊಳಕೆ ಬಂದ 2 ಟೇಬಲ್ ಚಮಚ ಮೆಂತ್ಯ ಹಾಕಿ ಹುರಿದು, ರುಬ್ಬಿದ ಮಿಶ್ರಣ, ಹುಣಸೆ ರಸ, ಕಡಲೇ ಬೀಜದಷ್ಟು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ತಟ್ಟೆ ಮುಚ್ಚಿ ಮೆಂತ್ಯ ಪೂರ್ತಿಯಾಗಿ ಬೇಯುವವರೆಗೆ ಬೇಯಿಸಿ.
7. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಆರೋಗ್ಯಕರವಾದ ಮೆಂತ್ಯ ಗೊಜ್ಜು/ವೆಂದ್ಯ ಕೊಳಂಬು ಸಿದ್ಧ!

ಈ ರೆಸಿಪಿ ಮೆಂತ್ಯದ ಮಹತ್ವ ಗೊತ್ತಿರುವವರಿಗೆ ತುಂಬಾ ಇಷ್ಟವಾಗುತ್ತೆ ಎನ್ನುವುದು ನನ್ನ ಅಭಿಪ್ರಾಯ!

*ಮೊಳಕೆ ಬಂದ ಮೆಂತ್ಯದ ಬದಲು ಸಾಧಾರಣ ಮೆಂತ್ಯ ಬೇಕಾದರೆ ಹಾಕಿಕೊಳ್ಳಬಹುದು.ನಿಮ್ಮ ರುಚಿಗೆ ತಕ್ಕಷ್ಟು ಮೆಂತ್ಯ ಹಾಕಿಕೊಳ್ಳಬಹುದು.

*ಅಥವಾ ಮೆಂತ್ಯ ಸೊಪ್ಪು ಹಾಕಿ ಬೇಕಾದರೂ ಮಾಡಬಹುದು!

*ಮೆಂತ್ಯ ಮೊಳಕೆ ಬಂದ ನಂತರ ಕಹಿ ಕಡಿಮೆ ಆಗಿರುತ್ತದೆ. ಆರೋಗ್ಯಕ್ಕೂ ಬಹಳ ಒಳ್ಳೆಯದು!

ಈ ಗೊಜ್ಜು ಅನ್ನ, ಚಪಾತಿಯೊಂದಿಗೆ ಸಹ ತುಂಬಾ ಚೆನ್ನಾಗಿರುತ್ತದೆ!

Saturday, 16 December 2017

ಗೋಧಿ ಹಿಟ್ಟಿನ ದೋಸೆ

     


        ಗೋಧಿ ಹಿಟ್ಟು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ.ಏನು ತಿಂಡಿ ಮಾಡಲು ತಯಾರಿ ಮಾಡಿಕೊಳ್ಳದಿದ್ದಲ್ಲಿ ಗೋಧಿ ದೋಸೆಯನ್ನು ತಕ್ಷಣಕ್ಕೆ ಮಾಡಬಹುದು.ರುಚಿಯೂ ಚೆನ್ನಾಗಿಯೇ ಇರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಗೋಧಿಹಿಟ್ಟು-2ಲೋಟ
ತೆಂಗಿನತುರಿ-4ಚಮಚ
ಹಸಿಮೆಣಸು-2
ಈರುಳ್ಳಿ-1
ಕರಿಬೇವು
ಶುಂಠಿ
ಉಪ್ಪು
ನೀರು-1ಲೋಟ (ಹಿಟ್ಟಿಗೆ ಬೇಕಾದಷ್ಟು)

ಮಾಡುವ ವಿಧಾನ:
1.ಗೋಧಿಹಿಟ್ಟು ಕಲಸುವ ಮುನ್ನ ಬಾಣಲೆಗೆ ಹಾಕಿ ಸ್ವಲ್ಪ ಹುರಿದುಕೊಂಡರೆ ದೋಸೆ ಚೆನ್ನಾಗಿ ಬರುತ್ತದೆ.
2.ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಕಲಸಿಕೊಳ್ಳಿ.
3.ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿ,ತುಪ್ಪ ಸವರಿದ ಹೆಂಚಿಗೆ ಹಾಕಿ ಬೇಯಿಸಿ.
4.ಇದು ತೆಳ್ಳಗೆ,ದಪ್ಪಗೆ ಹೇಗೆ ಬೇಕಾದರೂ ಮಾಡಬಹುದು.


ಗಸಿ,ಶೇಂಗಾಚಟ್ನಿ ,ಕಾಯಿಚಟ್ನಿ ಯಾವುದರ ಜೊತೆಗಾದ್ರು ತಿನ್ನಲು ಚೆನ್ನಾಗಿರುತ್ತದೆ. ಸುಲಭವೂ ಕೂಡ.

Friday, 15 December 2017

ಮದ್ದೂರು ವಡೆ

           
          ಮದ್ದೂರು ವಡೆ ..ಇದೊಂದು ಬಹು ಜನಪ್ರಿಯ ತಿಂಡಿ. ಇದು ಮಾಡೋಕೆ ಗೊತ್ತಿಲ್ಲ ಅಂದ್ರೆ ಆಶ್ಚರ್ಯ ಪಡೋ ಜನರೇ ಜಾಸ್ತಿ. ಅಷ್ಟೊಂದು ಹೆಸರುವಾಸಿ ಈ ತಿಂಡಿ.
ಹಲವರು ಹಲವು ಬಗೆಯಲ್ಲಿ ಇದನ್ನು ಮಾಡುತ್ತಾರೆ. ಮಾಡೋದು ಅತ್ಯಂತ ಸುಲಭ. ರುಚಿಯೂ ಹಾಗೆ .. ತುಂಬಾ ಸ್ವಾದಿಷ್ಟ. ಇದಕ್ಕೆ ಮಾರು ಹೋಗದ ಜನರಿಲ್ಲ.
ನನ್ನ ನೆಚ್ಚಿನ ತಿಂಡಿಗಳಲ್ಲಿ ಇದು ಒಂದು.ಇದು ನನ್ನ ಸ್ನೇಹಿತರೊಬ್ಬರ ರೆಸಿಪಿ. 😋

ಬೇಕಾಗುವ ಸಾಮಾಗ್ರಿಗಳು:
ಅಕ್ಕಿ ಹಿಟ್ಟು -1 ಕಪ್
ಚಿರೋಟಿ ರವೆ- 1/2 ಕಪ್
ಮೈದಾ- 1/4 ಕಪ್
ಈರುಳ್ಳಿ- 2 ಸಣ್ಣಗೆ ಹೆಚ್ಚಿದ್ದು
ಹಸಿಮೆಣಸು -ಖಾರಕ್ಕೆ (ನಾನು ಇಲ್ಲಿ 5 ಹಾಕಿದ್ದೇನೆ)
ಅಚ್ಚ ಖಾರದ ಪುಡಿ- 1 ಚಮಚ
ಉಪ್ಪು ರುಚಿಗೆ
ಅರಿಶಿನ ಪುಡಿ -1 ಚಮಚ
ಕಾದ ಎಣ್ಣೆ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಕಾಯಿಸಲು ಎಣ್ಣೆ

ಮಾಡುವ ವಿಧಾನ:
1.ಮೊದಲಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು ಎಲ್ಲ ಸಣ್ಣಗೆ ಹೆಚ್ಚಿಡಿ.
2.ಒಂದು ಪಾತ್ರೆಗೆ ಅಕ್ಕಿ ಹಿಟ್ಟು, ರವೆ, ಮೈದಾ ಎಲ್ಲ ಹಾಕಿ ಈ ಮೇಲೆ ಹೇಳಿದ ಸಾಮಾಗ್ರಿಗಳೆಲ್ಲ ಹಾಕಿ ಸ್ವಲ್ಪ ಬಿಸಿ ಎಣ್ಣೆ ಹಾಕಿ ನೀರು ಸೇರಿಸಿ ಕಲೆಸಿಕೊಳ್ಳಿ.
3. ಕಲೆಸಿದ ಹಿಟ್ಟನ್ನು ಕೈಯಲ್ಲಿ ವಡೆ ಆಕಾರಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಬಿಟ್ಟು ಎರಡು ಬದಿ ಕಾಯಿಸಿ ತೆಗೆಯಿರಿ.

          ನಿಮ್ಮ ಮದ್ದೂರು ವಡೆ ತಿನ್ನಲು ರೆಡಿ. ಇದನ್ನು ಚಟ್ನಿ ಅಥವಾ ಸಾಸ್ ಜೊತೆ ಸವಿಯಿರಿ.ಸಂಜೆಯ ಚಹಾ ಜೊತೆ ಒಳ್ಳೆಯ ಜೊತೆಗಾರ.

ಹೀರೆಕಾಯಿ ಪಲ್ಯ

         

         ಹೀರೆಕಾಯಿ ಯಿಂದ ಪಲ್ಯ ,ಎಣ್ಣೆಗಾಯಿ, ಸಿಪ್ಪೆಯಿಂದ ಚಟ್ನಿ ಹೀಗೆ ನಾನಾ ಬಗೆ ಮಾಡಬಹುದು. ತಿನ್ನಲು ರುಚಿ. ಎಳೆ ಹೀರೆಕಾಯಿ ಒಂದು ರೀತಿ ಬೆಣ್ಣೆ ರುಚಿ ಕೊಡುತ್ತದೆ. ಹೀರೆಕಾಯಿ ಬಜ್ಜಿಯಂತೂ ನನ್ನ ಫೇವರಿಟ್.
ಬೇಕಾಗುವ ಸಾಮಗ್ರಿಗಳು:
ಹೀರೆಕಾಯಿ-1/4ಕೆಜಿ
ಈರುಳ್ಳಿ-1ದೊಡ್ಡದು
ಟೊಮ್ಯಾಟೋ-1ದೊಡ್ಡದು
ಖಾರದ ಪುಡಿ-1ಚಮಚ
ಬೆಳ್ಳುಳ್ಳಿ
ಸಾಸಿವೆ
ಕರಿಬೇವು
ಬೆಲ್ಲ
ಎಣ್ಣೆ
ಉಪ್ಪ್ಪು
ಗುರೆಳ್ಳು ಪುಡಿ(ಬೇಕಾದಲ್ಲಿ)
ಕಾಯಿತುರಿ(ಬೇಕಾದಲ್ಲಿ)
ಮಾಡುವ ವಿಧಾನ:
1. ಮೊದಲಿಗೆ ಹೀರೆಕಾಯಿ ಸಿಪ್ಪೆ ತುರಿದು ಸಣ್ಣಗೆ ಹೆಚ್ಚಿಕೊಳ್ಳಿ.
2.ಬಾಣಲೆಗೆ ಎಣ್ಣೆ, ಸಾಸಿವೆ,ಕರಿಬೇವು,ಬೆಳ್ಳುಳ್ಳಿ ಹಾಕಿ. ಒಗ್ಗರಣೆ ಮಾಡಿ.
3.ಈರುಳ್ಳಿ ಹಾಕಿ ಹುರಿದು,ಟೊಮ್ಯಾಟೋ ಹಾಕಿ ಮೆತ್ತಗಾಗುವವರೆಗೂ ಹುರಿಯಿರಿ.
4.ಈಗ ಹೀರೆಕಾಯಿ ಸೇರಿಸಿ ಮಿಶ್ರ ಮಾಡಿ,ಚೂರು ಬೆಲ್ಲ ನೀರು ಹಾಕಿ ಬೇಯಲು ಬಿಡಿ.
5.ಬೆಂದು ಮೆತ್ತ ಗಾದ ಹೀರೆಕಾಯಿಗೆ ಉಪ್ಪು,ಖಾರದ ಪುಡಿ,ಗುರೆಳ್ಳು ಪುಡಿ ಹಾಕಿ ಕೈಯಾಡಿಸಿ.
6.ಮುಚ್ಚಿ 1ನಿಮಿಷ ಬೇಯಿಸಿ,ಕೊತ್ತಂಬರಿ ಸೊಪ್ಪು,ಕಾಯಿತುರಿ ಸೇರಿಸಿ.
ಚಪಾತಿ,ರೊಟ್ಟಿ ಜೊತೆ ಚೆನ್ನಾಗಿರುತ್ತದೆ.

*ಗುರೆಳ್ಳು ಪುಡಿ ಬೇಕಾದಲ್ಲಿ ಅಷ್ಟೇ ಹಾಕಿ.
*ಶೇಂಗಾ ಪುಡಿ ಇಲ್ಲಾ ಪುಟಾಣಿ ಪುಡಿ ಹಾಕಿದರೆ ಸ್ವಲ್ಪ ನೀರಾಗಿ ಮಾಡಿದರೆ ರಸ ಬರುತ್ತದೆ.
*ಉದುರು ಪಲ್ಯ ಬೇಕಾದವರು ಜಾಸ್ತಿ ನೀರು ಹಾಕಬೇಡಿ.

Thursday, 14 December 2017

ತೆಂಗಿನಕಾಯಿಚಟ್ನಿ

         
ಚಟ್ನಿಗಳಲ್ಲಿ ತುಂಬಾ ವಿಧ. ಆದರೆ ತೆಂಗಿನಕಾಯಿ ಚಟ್ನಿ ಎಲ್ಲಾ ಮನೆಗಳಲ್ಲಿ ಮಾಡುವ ಸಾಮಾನ್ಯ ಚಟ್ನಿ. ಇಲ್ಲಿದೆ ನಾನು ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
ತೆಂಗಿನಕಾಯಿ ತುರಿ-1/2 ಹೋಳು
ಪುಟಾಣಿ-1ಚಮಚ
ಹಸಿಮೆಣಸು-3
ಬೆಳ್ಳುಳ್ಳಿ-5ಎಸಳು
ಹುಣಸೆಹುಳಿ
ಉಪ್ಪು
ಮಾಡುವ ವಿಧಾನ:
1. ಮೊದಲಿಗೆ ಮಿಕ್ಸಿ ಜಾರಿಗೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ರುಬ್ಬಿ.
2.ಒಗ್ಗರಣೆಗೆ:ಎಣ್ಣೆ,ಸಾಸಿವೆ,ಜೀರಿಗೆ,ಕರಿಬೇವು ಹಾಕಿ ಒಗ್ಗರಣೆ ಕೊಡಿ.
3.ರುಚಿಯಾದ ಚಟ್ನಿ ಇಡ್ಲಿ, ದೋಸೆ, ಪಡ್ಡು,ರೊಟ್ಟಿ ಜೊತೆ ತಿನ್ನಲು ತಯಾರು.


*ಖಾರ ಜಾಸ್ತಿ ಆದಲ್ಲಿ ಇಲ್ಲವೇ ಸಿಹಿ ಇಷ್ಟ ಪಡುವವರು ಬೆಲ್ಲ ಹಾಕಬಹುದು.

Wednesday, 13 December 2017

ಟೊಮ್ಯಾಟೋ ಬಾತ್

 
 ಅನ್ನದ ಬಗೆಗಳಲ್ಲಿ ಟೊಮ್ಯಾಟೋ ಬಾತ್ ಸುಲಭವಾಗಿ ಮಾಡುವಂತದು. ತಿನ್ನಲು ರುಚಿಯಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಜೀರಾ ಅಕ್ಕಿ/ಬಾಸುಮತಿ ಅಕ್ಕಿ-1ಕಪ್
ಟೊಮ್ಯಾಟೋ-2
ಈರುಳ್ಳಿ-1
ಬೆಳ್ಳುಳ್ಳಿ ಸಿಪ್ಪೆ ಸುಲಿದದ್ದು-5 ಎಸಳು
ಹಸಿಮೆಣಸು-1
ಖಾರದ ಪುಡಿ-1 ದೊಡ್ಡ ಚಮಚ
ಮಸಾಲೆ:ಚಕ್ಕೆ, ಲವಂಗ,ಏಲಕ್ಕಿ, ಅನಾನಸ್ ಹೂ, ಪಲಾವ್ ಎಲೆ-ಎಲ್ಲವೂ ಒಂದೊಂದು
ಕಾಳು ಮೆಣಸು-4
ಎಣ್ಣೆ ಮತ್ತು ತುಪ್ಪ
ಗರಂ ಮಸಾಲ-1/2 ಚಮಚ(ಬೇಕಾದಲ್ಲಿ)
ಕೊತ್ತಂಬರಿಸೊಪ್ಪು, ಪುದೀನಸೊಪ್ಪು
ಮಾಡುವ ವಿಧಾನ:
1. ಮೊದಲಿಗೆ ಅಕ್ಕಿ1 ತೊಳೆದು 1/2 ಗಂಟೆ ನೆನೆಸಿ,ನೀರು ಬಸಿದಿಡಿ.
2. ಕುಕ್ಕರಿಗೆ ಎಣ್ಣೆ ಮತ್ತು ತುಪ್ಪ ಹಾಕಿ ಎಲ್ಲಾ ಮಸಾಲೆ ಹಾಕಿ,ಕೊತ್ತಂಬರಿಸೊಪ್ಪು ,ಪುದೀನಸೊಪ್ಪು ಹಾಕಿ ಹುರಿದು ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ.
3.ಉದ್ದಕ್ಕೆ,ತೆಳ್ಳಗೆ ಹೆಚ್ಚಿದ ಟೊಮ್ಯಾಟೋ ಹಾಕಿ ಹುರಿದು, ಖಾರದ ಪುಡಿ ಸೇರಿಸಿ ಮಿಶ್ರ ಮಾಡಿ.
4.2ಕಪ್ ನೀರು,ಉಪ್ಪು ಹಾಕಿ ಕುದಿಸಿ,ಬಸಿದ ಅಕ್ಕಿ ಹಾಕಿ ಕಲಸಿ ಮುಚ್ಚಳ ಮುಚ್ಚಿ 2 ವಿಸಲ್ ಕೂಗಿಸಿ.
5.ಬಿಸಿ ಬಿಸಿ ಬೇಗ ಆಗುವ ಟೊಮ್ಯಾಟೋ ಬಾತ್ ತಿನ್ನಲು ರೆಡಿ.

*ಸ್ವಲ್ಪ ಅಕ್ಕಿ ಮಾಡೋದಾದರೆ ಗರಂ ಮಸಾಲ ಬೇಕಾಗಿಲ್ಲ,ಮಸಾಲೆ ಪದಾರ್ಥ ಹಾಕಿದರೆ ಸಾಕು.ಜಾಸ್ತಿ ಮಾಡೋದಾದರೆ ಹಾಕಿ.

Tuesday, 12 December 2017

ಆಲೂಗಡ್ಡೆ ಪಲ್ಯ

ಸುಲಭ ವಾಗಿ ಆಗುವ ಇನ್ನೊಂದು ಪಲ್ಯ ಆಲೂಗಡ್ಡೆ ಪಲ್ಯ. ದೋಸೆಯ ಜೊತೆ ಒಳ್ಳೆ ಕಾಂಬಿನೇಷನ್. ನಾನು ಮಸಾಲ ದೋಸೆ ಮಾಡಿದಾಗಲೆಲ್ಲ ಹೆಚ್ಚಾಗಿ ಇದನ್ನೇ ಮಾಡೋದು.
ಬೇಕಾಗುವ ಸಾಮಾಗ್ರಿಗಳು:
ಆಲೂಗಡ್ಡೆ-3
ಹಸಿಮೆಣಸು-2
ಈರುಳ್ಳಿ-1
ಸಾಸಿವೆ
ಬೆಳ್ಳುಳ್ಳಿ
ಜೀರಿಗೆ
ಕರಿಬೇವು
ಎಣ್ಣೆ
ಮಾಡುವ ವಿಧಾನ:
1.ಮೊದಲಿಗೆ ಕುಕ್ಕರಿನಲ್ಲಿ ಆಲೂಗಡ್ಡೆ 2 ಭಾಗ ಕತ್ತರಿಸಿ ಹಾಕಿ ಬೇಯಿಸಿ, ಆರಿಸಿ, ಸಿಪ್ಪೆ ಸುಲಿದು ಪೀಸ್ ಮಾಡಿ.
2.ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಹಾಕಿ ಹುರಿದು, ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ.
3.ಅರಿಸಿನ, ಆಲೂಗಡ್ಡೆ, ಹಾಕಿ ಕಲಸಿ, ಸ್ವಲ್ಪ ನೀರು, ಉಪ್ಪು ಹಾಕಿ ಬೇಯಿಸಿ.
4.ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
5.ದೋಸೆ ಯೊಂದಿಗೆ ತಿನ್ನಲು, ಅನ್ನ ರಸಂ ಜೊತೆ ತಿನ್ನಲು ರುಚಿಯಾಗಿರುತ್ತದೆ.

ಮಸಾಲ ದೋಸೆ

 
 ಒಂದು ಕಾಲವಿತ್ತು, ನಾನು ಹೋಟೆಲಿಗೆ ಹೋದ್ರೆ ಮೊದಲು ಕೇಳುತ್ತಿದ್ದುದು ಮಸಾಲ ದೋಸೆ. ನಾನು ಮಾತ್ರವಲ್ಲದೆ ನನ್ನ ಸಾಲಿನಲ್ಲಿ ತುಂಬಾ ಜನ ಇದಾರೆ ಅಂತ ನಂಗೆ ಗೊತ್ತು. ಈಗ ಮನೆಯಲ್ಲೇ ಮಸಾಲ ದೋಸೆ ಮಾಡುತ್ತೇನೆ ಹೊರಗಡೆ ತಿನ್ನಲ್ಲ. ನೀವು ಪ್ರಯತ್ನಿಸಿ.
ಬೇಕಾಗುವ ಸಾಮಾಗ್ರಿಗಳು:
ಉದ್ದಿನಬೇಳೆ-1ಕಪ್
ಅಕ್ಕಿ-3ಕಪ್
ತೊಗರಿಬೇಳೆ-1ಚಮಚ
ಕಡ್ಲೆಬೇಳೆ-1ಚಮಚ
ಮೆಂತ್ಯ-1/2ಚಮಚ
ಉಪ್ಪು-ರುಚಿಗೆ
ಮಾಡುವ ವಿಧಾನ:
1.ಬೆಳಿಗ್ಗೆ ಉದ್ದಿನಬೇಳೆ, ಕಡ್ಲೆಬೇಳೆ, ತೊಗರಿಬೇಳೆ, ಮೆಂತ್ಯ ಒಟ್ಟಿಗೆ ನೆನೆಸಿ, ಅಕ್ಕಿ ಬೇರೆ ನೆನೆಸಿ 6-8hr.
2.ರಾತ್ರಿ ಬೇಳೆ ಕಾಳುಗಳನ್ನು ಮೊದಲು ರುಬ್ಬಿ ಪಾತ್ರೆಗೆ ಹಾಕಿ, ನಂತರ ಅಕ್ಕಿ ರುಬ್ಬಿ(ಅವಲಕ್ಕಿ ಬೇಕಾದಲ್ಲಿ ಸ್ವಲ್ಪ ನೆನೆಸಿ ಅಕ್ಕಿ ಜೊತೆ ರುಬ್ಬಬಹುದು).
3.ರುಬ್ಬಿದನ್ನು ಚೆನ್ನಾಗಿ ಕಲಸಿ, ರಾತ್ರಿ ಪೂರ್ತಿ ಹುದುಗಲು ಬಿಡಿ.
4. ಬೆಳಿಗ್ಗೆ ರುಚಿಗೆ ಉಪ್ಪು, ಸೋಡಾ ಬೇಕಾದಲ್ಲಿ ಸೇರಿಸಿ ಕೂಡಿಸಿ.
5.ತವಾದ ಮೇಲೆ ದೋಸೆ ತೆಳ್ಳಗೆ ಅಗಲವಾಗಿ ಹರಡಿ, ಬೇಯಿಸಿ, ತಿರುವಿ ಹಾಕಿ ತೆಗೆದು ಬಿಡಿ.
6.ಬಿಸಿ ಬಿಸಿ ಮಸಾಲ ದೋಸೆ ಆಲೂಗಡ್ಡೆ ಪಲ್ಯ, ಕಾಯಿಚಟ್ನಿಯೊಂದಿಗೆ ತಿನ್ನಲು ರೆಡಿ.

*ಉದ್ದಿನಬೇಳೆ ಚೆನ್ನಾಗಿರಬೇಕು, ಇಲ್ಲವಾದಲ್ಲಿ ಅಕ್ಕಿ ಸ್ವಲ್ಪ ಕಡಿಮೆ ಹಾಕಿ.

ಅವಲಕ್ಕಿ ಒಗ್ಗರಣೆ


        ಬೇಗ ಮತ್ತು ಸುಲಭ ಮತ್ತೆ ರುಚಿಯಾಗಿ ಆಗುವ ತಿಂಡಿ ಗಳಲ್ಲಿ ಒಂದು ಅವಲಕ್ಕಿ ಒಗ್ಗರಣೆ.
ಬೇಕಾಗುವ ಸಾಮಾಗ್ರಿಗಳು:
ದಪ್ಪ ಅವಲಕ್ಕಿ-1ಅಳತೆ
ಈರುಳ್ಳಿ-1
ಟೊಮ್ಯಾಟೋ-1
ಹಸಿಮೆಣಸು-2
ಸಾಸಿವೆ
ಅರಿಸಿನ
ಎಣ್ಣೆ
ಶೇಂಗಾ ಕಾಳು
ಕರಿಬೇವು
ಬೆಳ್ಳುಳ್ಳಿ
ಪುಟಾಣಿ ಪುಡಿ
ಮಾಡುವ ವಿಧಾನ:
1.ಮೊದಲಿಗೆ ದಪ್ಪ ಅವಲಕ್ಕಿಯನ್ನು ಅಗಲವಾದ ಬೇಸನ್ನಿಗೆ ಹಾಕಿ ಬಿಸಿ ನೀರು ಮತ್ತು ತಣ್ಣೀರನ್ನು ಹಾಕಿ ನೆನೆಯಲು ಬಿಡಿ.
2.ಮೆತ್ತಗಾದಾಗ ನೀರು ಹಿಂಡಿ ತೆಗೆದು, ತಟ್ಟೆಗೆ ಹಾಕಿ ಪುಟಾಣಿ ಪುಡಿ ಹಾಕಿ ಕಲಸಿ.
3.ಬಾಣಲೆಗೆ ಎಣ್ಣೆ, ಸಾಸಿವೆ,ಕರಿಬೇವು,ಬೆಳ್ಳುಳ್ಳಿ, ಶೇಂಗಾ ಕಾಳು ಹಾಕಿ ಹುರಿಯಿರಿ.
4.ಹಸಿಮೆಣಸು, ಈರುಳ್ಳಿ ಹಾಕಿ ಹುರಿದು, ಅರಿಸಿನ,ಟೊಮ್ಯಾಟೋ ,ಉಪ್ಪು ಸೇರಿಸಿ ಹುರಿಯಿರಿ.
5.ಅವಲಕ್ಕಿಯನ್ನು ಒಗ್ಗರಣೆಗೆ ಸೇರಿಸಿ ಕಲಸಿ, ಉಪ್ಪು, ಹುಳಿ ನೋಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ.
6.ಬೇಕಾದಲ್ಲಿ ಲಿಂಬೆರಸ ಸೇರಿಸಿ.

Sunday, 10 December 2017

ಕಲ್ಲಂಗಡಿ ಜ್ಯೂಸ್

ಬೇಸಿಗೆಯಲ್ಲಿ ದೇಹ ತಂಪಾಗಿರಲು ಇಲ್ಲವಾದಲ್ಲಿ ಕಲ್ಲಂಗಡಿ ಹಣ್ಣು ಪ್ರಿಯರಿಗೆ ಇಲ್ಲಿದೆ ಒಂದು ಸಿಂಪಲ್ಲಾದ ಹೊಸ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು:
ಕಲ್ಲಂಗಡಿ ಹಣ್ಣು
ಸಕ್ಕರೆ
ನೀರು
ಮಾಡುವ ವಿಧಾನ:
1. ಮೊದಲಿಗೆ ಕಲ್ಲಂಗಡಿ ಹಣ್ಣು ಹೆಚ್ಚಿ, ಬೀಜ ತೆಗದು ಸಣ್ಣಗೆ ಹೆಚ್ಚಿ ಜಾರಿಗೆ ಹಾಕಿ.
2.ನಿಮಗೆ ಸಿಹಿ ಬೇಕಾದಷ್ಟು ಸಕ್ಕರೆ 1-2 ಚಮಚ ಹಾಕಿ.
3.ನೀರು ಹಾಕಿ ಚೆನ್ನಾಗಿ ರುಬ್ಬಿ,ಜರಡಿಯಲ್ಲಿ ಸೋಸಿ. ಕುಡಿಯಿರಿ.