ತಾಲಿಪೆಟ್ಟು ಎಂದರೆ ಅಕ್ಕಿರೊಟ್ಟಿ ರೀತಿಯೇ ಇರುವ ಇನ್ನೊಂದು ನಮೂನೆಯ ರೊಟ್ಟಿ. ಅಕ್ಕಿ ರೊಟ್ಟಿ ಸಾದಾ ಮಾಡುತ್ತಾರೆ,ಆದರೆ ತಾಲಿಪೆಟ್ಟು ಮಾತ್ರ ಮಸಾಲ,ಸೊಪ್ಪು ಉಪಯೋಗಿಸಿ ಮಾಡುತ್ತಾರೆ.ಇದು ಉತ್ತರ ಭಾರತದ ತಿನಿಸುಗಳಲ್ಲೊಂದು.
ಬೆಳಗಿನ ತಿಂಡಿಗೆ ಏನು ತಯಾರಿ ಮಾಡಿಕೊಳ್ಳದಿದ್ದಲ್ಲಿ ತಕ್ಷಣಕ್ಕೆ ಈ ತಿಂಡಿಯನ್ನು ಮಾಡಬಹುದು. ಮೊದಲಿಗೆ ಸ್ವಲ್ಪ ರಗಳೆ ಎನಿಸಿದರೂ ಒಂದೆರಡು ಬಾರಿ ಮಾಡಿದಾಗ ತುಂಬಾ ಸುಲಭವಾಗಿ ಬರುತ್ತದೆ.
ಕೆಳಗೆ ಕೊಟ್ಟಿರುವ ಅಳತೆಗೆ ಸುಮಾರು 15 ತೆಳ್ಳಗಿನ ತಾಲಿಪೆಟ್ಟು ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು:
ಅಕ್ಕಿಹಿಟ್ಟು-3ಬಟ್ಟಲು
ನೀರು-3 1/4ಬಟ್ಟಲು
ಈರುಳ್ಳಿ-1
ಹಸಿಮೆಣಸಿನ ಪೇಸ್ಟ್-3 ರದ್ದು
ಜೀರಿಗೆ/ಓಂಕಾಳು-1/2ಚಮಚ
ಕೊತ್ತಂಬರಿ ಸೊಪ್ಪು-1/2 ಬಟ್ಟಲು
ಸಬ್ಬಸಿಗೆ ಸೊಪ್ಪು-1/2 ಬಟ್ಟಲು(ಇಲ್ಲವಾದಲ್ಲಿ ಬಿಡಿ)
ಕರಿಬೇವು-6ಎಲೆ
ಎಣ್ಣೆ-ಅಗತ್ಯಕ್ಕೆ
ಮಾಡುವ ವಿಧಾನ:
1.ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಅಳತೆ ಮಾಡಿ ಹಾಕಿ ಕುದಿಯಲು ಬಿಡಿ.
2.ಕುದಿಯುತ್ತಿರುವ ನೀರಿಗೆ ಉಪ್ಪು,ಈರುಳ್ಳಿ,ಅಕ್ಕಿಹಿಟ್ಟನ್ನು ಸೇರಿಸಿ,3 ನಿಮಿಷ ಹಾಗೆಯೇ ಬಿಡಿ(ಕೈಯಾಡಿಸಬೇಡಿ).
3. ಹಿಟ್ಟು ಬೆಂದಾಗ ಚೆನ್ನಾಗಿ ಕಲಸಿ ಗಂಟಿಲ್ಲದಂತೆ ಮಿಶ್ರ ಮಾಡಿ.
4.ಒಂದು ಪಾತ್ರೆಗೆ ಹಸಿಮೆಣಸಿನಕಾಯಿ ಪೇಸ್ಟ್, ಸೊಪ್ಪುಗಳು, ಓಂಕಾಳು, ಸಣ್ಣಗೆ ಹೆಚ್ಚಿದ ಕರಿಬೇವು,ಬಿಸಿ ಹಿಟ್ಟಿನ ಮಿಶ್ರಣ ಸೇರಿಸಿ ಎಲ್ಲವನ್ನು ಚೆನ್ನಾಗಿ ಕಲಸಿ.
5. ಹಿಟ್ಟಿನ ಪ್ರಮಾಣ ಜಾಸ್ತಿ ಎನಿಸಿದರೆ ಸ್ವಲ್ಪ ಭಾಗ ಅಷ್ಟೇ ತೆಗೆದುಕೊಂಡು ಚೆನ್ನಾಗಿ ನಾದಿ.
6.ಕಿತ್ತಳೆ ಗಾತ್ರದ ಉಂಡೆ ಮಾಡಿ ಪ್ಲಾಸ್ಟಿಕ್ ಹಾಳೆಯ ಮೇಲಿಟ್ಟು ಇನ್ನೊಂದು ಹಾಳೆ ಮುಚ್ಚಿ ,ಲಟ್ಟಣಿಗೆಯಿಂದ ತೆಳ್ಳಗೆ ಲಟ್ಟಿಸಿ.(ಬದಿ ಒಡೆದರೆ ಕೈಯಿಂದ ಸರಿ ಮಾಡಿಕೊಳ್ಳಬೇಕು).
7 .ಹೆಂಚಿಗೆ ಎಣ್ಣೆ ಸವರಿ 2 ಕಡೆ ಕೆಂಪು ಚುಕ್ಕೆ ಬರುವ ಹಾಗೆ ಬೇಯಿಸಿ.
ತೆಂಗಿನಕಾಯಿ-ಕಡ್ಲೆ ಚಟ್ನಿಯೊಂದಿಗೆ ಬಿಸಿ-ಬಿಸಿಯಾಗಿ ತಿನ್ನಲು ಬಲು ರುಚಿ .
ಸೂಚನೆ:
1.ಹಿಟ್ಟು ತುಂಬಾ ಬಿಸಿಯಿದ್ದಾಗ ನಾದಬೇಡಿ.
2.ಅಂಟು ಎನಿಸಿದರೆ ಕೈಗೆ ಎಣ್ಣೆ ಸವರಿಕೊಳ್ಳಿ.
ಮಾಡಿ ನೋಡಿ,ತಿಂದು ತಿಳಿಸಿ.















